11/11/2025
#ಸತ್ಯಾವತಾರ
ಡಾ.ಸಿ.ಅಶ್ವಥ್.
ಸುಗಮ ಸಂಗೀತಕ್ಕೊಂದು ಹೊಸ ದಿಸೆ ಕಲ್ಪಿಸಿದ ಮಾಂತ್ರಿಕ ಸಂಗೀತ ಸಂಯೋಜಕ,ಗಾಯಕ.
ಅಶ್ವಥ್‌ರ ಆ ಏರು ದನಿ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸೃಷ್ಟಿಸಿದ ರಸರೋಮಾಂಚನ,ಅವರ ಸಂಯೋಜನೆಯ ಹಾಡುಗಳಲ್ಲಿನ ಆ ಮೊರೆವ ಮಾಧುರ್ಯ ಅಶ್ವಥ್‌ರನ್ನು ಒಬ್ಬ ಸಂಗೀತಗಾರನನ್ನಾಗಿ ರಸಿಕರೆದೆಗಳಲ್ಲಿ ಸ್ಥಾಯಿಗೊಳಿಸಿದೆ.ಅಶ್ವಥ್‌ರನ್ನು,ಅವರ ಸ್ವರ ಸಂಯೋಜನೆಯನ್ನು ಆಲಿಸುವುದು ಹೃನ್ಮನಗಳಿಗೆ ಎಂದಿಗೂ ಹಬ್ಬ.ಸಿ.ಅಶ್ವಥ್ ಹಾಡುಗಳು ಒಂದಕ್ಕಿಂತ ಒಂದು ಭಿನ್ನ,ಚಿನ್ನ.
ಮೊಗ್ಗಿನಿಂದ ಸೆರೆಯೊಡೆದ ಗಂಧ ಹೂವಿಂದ ದೂರ,ದೂರ
ಎಲ್ಲುಂಟು ಆಚೆ ತೀರ?
ಅಶ್ವಥ್ ಹಾಡುಗಳ ಕಡಲಿಗೆ ತೀರವಾಗುವ ಬಯಕೆಗೆ ಮತ್ತೆ ಎದುರಾಗುತ್ತಿದೆ ಕಡಲೂರು ಕುಂದಾಪುರ.ಸಮುದ್ಯತಾ ಸಮೂಹ ಸಿ ಅಶ್ವಥ್ ಸ್ವರ ಸಂಯೋಜನೆಯ ಹಾಡುಗಳ ಸವಿ ಸಂಜೆಯೊಂದನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದೆ:ತೆಕ್ಕಟ್ಟೆ ಪ್ರೆಸಿಡೆಂಟ್ ಕನ್‌ವೆನ್ಶನ್ ಸೆಂಟರ್‌ನ ತೆರೆದ ಸಭಾಂಗಣದಲ್ಲಿ.ಇದೇ ಡಿಸೆಂಬರ್ 20ರ ಸಂಜೆ.
ಅಶ್ವಥ್‌ರ ಹಾಡುಗಳ ಈ ಪಯಣವನ್ನು ಇನ್ನಷ್ಟು ಖುಷಿಗೊಳಿಸುವರೆ ಅಶ್ವಥ್‌ರ ಸಂಗೀತಕ್ಕೆ ಸರಿಮಿಗಿಲೆನಿಸುವ ಅಶ್ವಥ್‌ರ ಸಹವರ್ತಿಗಳ ಮಾತುಗಳ ನವನೀತವಿದೆ!
ಹತ್ತವತಾರಗಳಲ್ಲಿ ಕನ್ನಡದ ಮನಗಳನ್ನು ಅರಳಿಸಿದ ಡಾ.ಅಶ್ವಥ್‌ರ ಹಾಡುಗಳ ಈ ಕಾರ್ಯಕ್ರಮವನ್ನು ನಾವು ಸತ್ಯಾವತಾರ ಎಂದು ಕರೆದಿದ್ದೇವೆ.ಅಶ್ವಥ್‌ರ ಸ್ವರ ಸಂಚಾರವನ್ನು ಅನುಭವಿಸಿ,ನಮ್ಮನ್ನೆಲ್ಲಾ ಆ ತಾರಕಕ್ಕೆ ತಲುಪಿಸಬಲ್ಲ ಏರು ಶೃತಿಯ ಗಾಯಕ,ಗಾಯಕಿಯರು,ಅಶ್ವಥ್‌ರ ಮೂಲ ಸಂಯೋಜನೆಯ ಸಾಮೀಪ್ಯವನ್ನು ತಲುಪಬಲ್ಲ ವಾದ್ಯವೃಂದ ಹಾಗೂ ಚೇತೋಹಾರಿ ನಿರೂಪಣೆಯ ಮಾತುಗಳು ಸತ್ಯಾವತಾರವನ್ನು ಮುನ್ನೆಡೆಸಲಿವೆ.
ಬನ್ನಿ:ತಪ್ಪಿ ಹೋದ ಚುಕ್ಕಿಯ ಜಾಡನ್ನು ಅರಸುತ್ತಾ
ಅಶ್ವಥ್‌ರನ್ನು ಆಲಿಸೋಣ!