25/08/2024
ಸುಮಾರು 30 ವರ್ಷಗಳ ಸುದೀರ್ಘ ಸಂಗೀತ ಸೇವೆಗೆ ಸಿಕ್ಕ ಸಾರ್ಥಕ್ಯ.
ಎಲ್ಲರಿಗೂ ತಿಳಿದಂತೆ ನಮ್ಮ ಕುಟುಂಬವು ಕಳೆದ 19 ವರ್ಷಗಳಿಂದ ವೇದ ಮಾತೆ, ಸಂಗೀತದ ಅಧಿದೇವತೆ ಶಾರದೆಯ ಸನ್ನಿಧಿಯಲ್ಲಿ ನಡೆಸಿಕೊಂಡು ಬರುತ್ತಿರುವ ಶಾರದಾ ಶಾಸ್ತ್ರೀಯ ಸಂಗೀತ ಸಭಾ ಹಾಗೂ ಸುಮಾರು 22 ವರ್ಷಗಳಿಂದ ನಡೆಯುತ್ತಿರುವ ಭಾರತೀ ಸಂಗೀತ ಶಾಲೆ ಮಲೆನಾಡಿನ ಸಂಗೀತ ಪ್ರಿಯರಿಗೆ ಚಿರಪರಿಚಿತ. ಶ್ರೀ ಮಠದ ಪ್ರವಚನ ಮಂದಿರದಲ್ಲಿ ಕಾರ್ಯಕ್ರಮ ಮಾಡುತ್ತಾ ಬಂದಿರುವ ನಮ್ಮ ಸಭಾ ನಡೆದು ಬಂದ ಹಾದಿ ಒಮ್ಮೆ ತಿರುಗಿ ನೋಡಿದರೆ ಆಶ್ಚರ್ಯವಾಗದೆ ಇರಲಾರದು. ಅದರ ಹಿಂದೆ ಇಡೀ ಕುಟುಂಬದ ಶ್ರಮ ತಿಳಿದವರಿಗೆ ಮಾತ್ರ ಗೊತ್ತು. ಅದರಲ್ಲಿಯೂ ಅಪ್ಪ ಹಾಗೂ ಅಮ್ಮ ಈ ಊರಿನಲ್ಲಿ ತಮ್ಮಿಂದ ಸಂಗೀತ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಸೇವೆ ಆಗಬೇಕು ಎಂಬ ಮಹದಾಸೆಯನ್ನು ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ್ದಾರೆ ಎನ್ನುವುದನ್ನು ಅತ್ಯಂತ ಹೆಮ್ಮೆಯಿಂದ ಹೇಳಬಲ್ಲೆ. ಇದೆಲ್ಲವೂ ಸಾಧ್ಯವಾದದ್ದು ಅವರಿಗಿದ್ದ ನಿಸ್ವಾರ್ಥ ಭಾವ ಹಾಗೂ ಜಗದಂಬೆ ತಾಯಿ ಶಾರದೆಯ ಅನುಗ್ರಹದಿಂದ. ನಮ್ಮ ಕುಟುಂಬವೇನು ಪಿತ್ರಾರ್ಜಿತವಾಗಿ ಬಂದ ಯಾವ ವಿಷಯವನ್ನೂ ಹೊಂದಿದ್ದಲ್ಲ. ಪ್ರತಿ ವಿಷಯವೂ ಅಪ್ಪನದ್ದು ಸ್ವಯಾರ್ಜಿತ. ಸ್ವಂತ ಪರಿಶ್ರಮದಿಂದ ನಡೆಸಿದ್ದು. ಆದರೆ ತಾನು ದುಡಿದಿದ್ದರಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಲು ಅವರು ಆರಿಸಿದ್ದು ಸಂಗೀತ. ಇದರ ಹಿಂದೆ ಇದ್ದಂತಹ ಆಶಯ ಬಹಳ ಸರಳ. ಈ ಕ್ಷೇತ್ರದಲ್ಲಿನ ಕೇಳುಗರಿಗೆ ಹಾಗು ಕಲಿಯುವ ಮಕ್ಕಳಿಗೆ ಒಳ್ಳೆಯ ಹಾಗೂ ಶಾಸ್ತ್ರೀಯ ಪರಂಪರೆಯ ಸಂಗೀತವನ್ನು ಕೇಳಿಸುವುದು ಇದರಿಂದ ಅವರನ್ನು ಒಳ್ಳೆಯ ಸಂಗೀತದೆಡೆಗೆ ಪ್ರೇರೇಪಿಸುವುದು. ಒಂದು ಸಣ್ಣ ಯೋಚನೆಯೊಂದಿಗೆ ಪ್ರಾರಂಭವಾದ ಸಭಾ ಇಂದು ಹಿಂತಿರುಗಿ ನೋಡಿದರೆ ಇಲ್ಲಿಗೆ ಬಂದ ಆರ್ಟಿಸ್ಟ್ಗಳು, ಸಭಾ ನಡೆದು ಬಂದ ರೀತಿ ನಮಗೇ ಆಶ್ಚರ್ಯ ಉಂಟುಮಾಡುತ್ತದೆ. ತಾಯಿ ಶಾರದೆಯು ತನ್ನ ಇಚ್ಛೆಯನ್ನು ನಮ್ಮಿಂದ ಮಾಡಿಸಿದ್ದಾಳೆ ಅಷ್ಟೇ. ಪ್ರತೀಬಾರಿ ನಾವು ಕರೆಯಬೇಕು ಅಂತ ಅಂದುಕೊಂಡಿದ್ದು ಅದೆಷ್ಟೋ ಜನರನ್ನು ಅಂತೆಯೇ ಜಗನ್ಮಾತೆಯ ಆಡಿದಾವರೆಗಳಲ್ಲಿ ತಮ್ಮ ಸೇವೆಗೆ ಅವಕಾಶ ಕೇಳಿದವರೆಷ್ಟು ಜನ ಆದರೆ ಶಾರದೆಯ ಚಿತ್ತ ಏನು ಎನ್ನುವುದು ಸದಾ ಸಶೇಷ. ನಾವು ನಿಮಿತ್ತ ಮಾತ್ರ. ಯೋಚನೆಯೇ ಮಾಡದೆ ಅದೆಷ್ಟೋ ಕಾರ್ಯಕ್ರಮಗಳು ನಡೆದ ದೃಷ್ಟಾಂತಗಳಿವೆ. ಪದ್ಮವಿಭೂಷಣ ಉಮಯಾಳಪುರಂ ಶಿವರಾಮನ್ , ಸಂಗೀತ ಕಲಾನಿಧಿ ಶತಾಯುಷಿ dr. ಟಿ ಕೆ ಮೂರ್ತಿ, ಪದ್ಮಶ್ರೀ. ರುದ್ರಪಟ್ನಮ್ ಸಹೋದರರು, ಶ್ರೀಮಷ್ಣಂ ವಿ ರಾಜಾರಾವ್, ಅನೂರು ಅನಂತಕೃಷ್ಣ ಶರ್ಮ, ವಿಠ್ಠಲ ರಾಮಮೂರ್ತಿ, ಆರ್ ಕೆ ಶ್ರೀರಾಮ್ ಕುಮಾರ್, ವಿ ವಿ ಸುಬ್ರಹ್ಮಣ್ಯಂ ರಂತಹ ಅದೆಷ್ಟೋ ಸಂಗೀತ ದಿಗ್ಗಜರನ್ನು ಕರೆಸಿ ಗೌರವಿಸಿ ಇಲ್ಲಿನ ಶ್ರೋತೃಗಳಿಗೆ ಶ್ರೇಷ್ಠ ಸಂಗೀತವನ್ನು ನಮ್ಮ ಊರಿನಲ್ಲಿ ಕೇಳುವಂತೆ ಮಾಡುವುದರೊಂದಿಗೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಯುವ ಕಲಾವಿದರುಗಳಾದ ವೆಂಕಟ ನಾಗರಾಜನ್, ಜೆ ಬಿ ಕೀರ್ತನ, ಕೆ ಗಾಯತ್ರಿ ಯವರಂತಹ ಅದೆಷ್ಟೋ ಕಲಾವಿದರು ಇಲ್ಲಿ ತಮ್ಮ ಸಂಗೀತದ ಖ್ಯಾತಿಯನ್ನು ಪಸರಿಸುವಲ್ಲಿ ಒಂದು ಮಹತ್ತರ ಕಾರ್ಯವನ್ನು ತಾಯಿ ಶಾರದೆಯು ನಮ್ಮಿಂದ ಮಾಡಿಸಿದ್ದಾಳೆ ಎಂದರೆ ತಪ್ಪಾಗಲಾರದು. ಹಾಗೆಂದು ಈ ಹಾದಿಯೇನು ಸುಗಮವಾಗಿರಲಿಲ್ಲ. ಆರ್ಟ್ಸಿಸ್ಟ್ ಗಳು ಇಲ್ಲಿಗೇ ಬಂದ ಮೇಲೆ ಅವರು ಇರುವ ರೂಮ್ ವ್ಯವಸ್ಥೆಯಿಂದ ಹಿಡಿದು ಅವರ ಊಟ ಉಪಚಾರ, ಕಾರ್ಯಕ್ರಮ, ಸಂಭಾವನೆ, ಮೈಕ್, ಹೀಗೆ ಅವರು ಬಂದಲ್ಲಿಂದ ಹೊರಡುವ ವರೆಗೆ ಪ್ರತಿಯೊಂದೂ ಬಂದವರಿಗೆ ಖುಷಿಯಾಗುವಂತೆ ನಡೆಸುವಾಗ ಅದೆಷ್ಟು ಜನರಲ್ಲಿ ಮುಲಾಜು ಖರ್ಚು ಮಾಡಿದ್ದಿದೆ, ಅದೆಷ್ಟು ಜನ ಮುಖ ಕಪ್ಪಿಟ್ಟಿದೆ, ಅದೆಷ್ಟು ಜನರಲ್ಲಿ ಇವರದ್ದೊಂದು ರಗಳೆ ಎಂದು ಬೈಸಿಕೊಂಡಿದ್ದಿದೆ ಎಂದು ಆಯೋಜಿಸಿದವರಿಗೆ ಮಾತ್ರ ಗೊತ್ತು. ಇದನ್ನೆಲ್ಲ ನೋಡಿ ಅದೆಷ್ಟು ಬಾರಿ ಇದ್ಯಾಕೆ ಬೇಕು ಇಷ್ಟೆಲ್ಲಾ ಒದ್ದಾಟ ಮಾಡಿ ಎಂದು ಮನೆಯಲ್ಲಿ ನಾವು ಅಪ್ಪನನ್ನು ಕೇಳಿದ್ದು ಸುಳ್ಳಲ್ಲ. ಆದರೆ ಸಂಗೀತ ಸೇವೆ ಎನ್ನುವುದು ಅವರ ಅಚಲ ನಿಲುವು. ಇದಕ್ಕೆ ವಿಶೇಷವಾಗಿ ಹೇಳಲೇಬೇಕಾದ ವಿಷಯ. ಎಲ್ಲರಿಗೂ ತಿಳಿದಂತೆ ನಮ್ಮ ಈ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿದ್ದದ್ದು ನಮ್ಮ ಹೋಟೆಲ್. ಎಲ್ಲ ಸಮಯಗಳೂ ಒಂದೇ ಥರ ಇರೋಲ್ವಲ್ಲ. ಆದರೆ ಈ ಸೇವೆ ನಿಲ್ಲಬಾರದು ಎಂದು ಫೈನಾನ್ಸ್ ನಿಂದ ಬಡ್ಡಿಯ ಲೆಕ್ಕದಲ್ಲಿ ಹಣ ಹೊಂದಿಸಿ ಕಾರ್ಯಕ್ರಮ ಮಾಡಿದ ಸಂದರ್ಭಗಳೆಷ್ಟೋ. ತಾಯಿ ಶಾರದೆ ಎಲ್ಲ ಪರೀಕ್ಷೆಗಳನ್ನು ಮಾಡಿದ್ದಾಳೆ. ಆದರೆ ನಮ್ಮ ನಂಬಿಕೆಯಂತೆ ಅವಳೇ ಅದನ್ನು ಮುನ್ನಡೆಸಿದ್ದಾಳೆ ಕೂಡ. ಇದರ ಜೊತೆ ಸಮಾಧಾನ ಇರುತ್ತಿದ್ದದ್ದು ಹಲವರ ಸಲಹೆ, ಪ್ರೋತ್ಸಾಹ, ಬಂದ ಆರ್ಟಿಸ್ಟ್ಗಳ ಅಭಿಮಾನ ಜೊತೆಗೆ ಮಠದ ಬಹಳಷ್ಟು ಜನರ ಸಹಕಾರ. ಬಹುಶಃ ಇಷ್ಟು ದೂರ ಸಾಗಲು ಇದೇ ಪ್ರೇರೇಪಣೆ. ಇವೆಲ್ಲದರ ಜೊತೆ ಸಂಗೀತಕ್ಕೆ ನೇರವಾಗಿ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಮಾಡುತ್ತಾ ಬಂದೆವು. ಇದರೊಂದಿಗೆ ತ್ಯಾಗರಾಜ ಆರಾಧನೆ ಸಲುವಾಗಿ 2 ದಿನ ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿ ವರ್ಷ ಸುಮಾರು 80 ರಿಂದ 100 ಜನ ಕಲಾವಿದರು ಇದರಲ್ಲಿ ಸೇವೆ ಸಲ್ಲಿಸುತ್ತಾರೆ.
ಈ 19 ವರ್ಷಗಳ ಸುದೀರ್ಘ ಪಯಣದಲ್ಲಿ ನಮ್ಮ ಸಭಾದಿಂದ ಸುಮಾರು 163 ಕಾರ್ಯಕ್ರಮಗಳು ಶಾರದೆಯ ಹಾಗು ಗುರುಗಳ ಅನುಗ್ರಹದಿಂದ ನಡೆದಿದೆ. ಇದರೊಂದಿಗೆ ಸಂಗೀತ ಕ್ಷೇತ್ರದಲ್ಲಿ ಸೇವೆಯಲ್ಲಿ ತೊಡಗಿರುವ ಸುಮಾರು 143ಜನ ಕಲಾವಿದರು ಅಥವಾ ಕಲಾ ಪೋಷಕರು ಎಂದು ಸನ್ಮಾನಿಸಿದ್ದೇವೆ. ನಮ್ಮ ವಿದ್ಯಾರ್ಥಿಗಳಾದ ಶಾರದಾ, ಸೀತಾಪ್ರಜ್ಞ, ಸತ್ಯಪ್ರಮೋದ, ಸುಧನ್ವ, ಪಂಚಮಿ ಇಂತಹ ಹಲವಾರು ವಿದ್ಯಾರ್ಥಿಗಳು ಇಂದು ಒಳ್ಳೆಯ ಸ್ಥಾನಕ್ಕೆ ಬೆಳೆಯುತ್ತಿರುವುದಕ್ಕೆ ಕಾರಣವೂ ಸಹ ಇದೇ ಸಭಾ. ಇಂದಿನವರೆಗೂ ಯಾರಲ್ಲೂ ಕಾರ್ಯಕ್ರಮಕ್ಕಾಗಿ ಹಣ ಕೇಳಿದ ಉದಾಹರಣೆ ನಮ್ಮಲ್ಲಿಲ್ಲ. ಇಂದಿನವರೆಗೂ ಸಭಾ ರಿಜಿಸ್ಟ್ರೇಷನ್ ಮಾಡಿ ಸರ್ಕಾರದ ಯಾವ ಸ್ಕೀಮ್ ಗಳಿಗೂ ಅರ್ಜಿ ಹಾಕಿಲ್ಲ. ತಾಯಿ ಶರೆದೆಯೇ ಇದರ ಅಧ್ಯಕ್ಷೆ ನಾವು ಅವರ ಸೇವಾರ್ಥಿಗಳು ಅಷ್ಟೇ.
ಇಷ್ಟೆಲ್ಲಾ ಉದ್ದ ಬರೆಯೋಕೆ ಕಾರಣ ಇಷ್ಟೇ. ಯಾವ ನಿರೀಕ್ಷೆ, ಫಲಾಪೇಕ್ಷೆಯಿಲ್ಲದೆ ನಮ್ಮ ಸೇವೆಯನ್ನು ಮುಂದುವರೆಸಿದ್ದ ನಮಗೆ ತಾಯಿ ಶಾರದೆಯ ಅನುಗ್ರಹ ಈ ರೀತಿ ಬರುತ್ತದೆ ಎಂಬ ಯೋಚನೆಯೇ ಇರಲಿಲ್ಲ ಇತ್ತೀಚೆಗೆ ನಡೆದ ವಿದ್ವಾನ್ ಹರಿಹರ ಸುಬ್ರಹ್ಮಣ್ಯಂ ಭಾಗವತರ ನಾಮಸಂಕೀರ್ಥಾನಾ ಕಾರ್ಯಕ್ರಮವನ್ನು ಉದ್ಘಾಟಿಸಲು ಬಂದಿದ್ದ ವೇ.ಬ್ರ.ಶ್ರೀ.ಕೃಷ್ಣಮೂರ್ತಿಗಳವರು ನಮ್ಮ ಸಂಗೀತ ಸಭಾದ ಮೂಲಕ ನಡೆಯುತ್ತಿರುವ ಸೇವೆಯನ್ನು ಗುರುತಿಸಿ ಮಹಾಸನ್ನಿದಾನಂಗಳವರ ಸುವರ್ಣ ಭಾರತೀ ಸಂಭ್ರಮದ ಪ್ರಯುಕ್ತ ನಮ್ಮ ಭಾರತೀ ಸಂಗೀತಶಾಲೆ ಹಾಗೂ ಶಾರದಾ ಶಾಸ್ತ್ರೀಯ ಸಂಗೀತ ಸಭಾ ಗೆ *ಸುವರ್ಣ ಭಾರತೀ ಸಂಗೀತ ಪುರಸ್ಕಾರ ನಿಧಿ* ಎಂಬ ಅಂಕಿತದಲ್ಲಿ 50.000.ರೂ ಧನಸಹಾಯವನ್ನು ಮಹಾಸನ್ನಿಧಾನಂಗಳವರ ಆಶೀರ್ವಾದದೊಂದಿಗೆ ಜಗದ್ಗುರುಗಳಾದ ಶ್ರೀ.ಶ್ರೀ.ಸನ್ನಿದಾನಂ ವಿಧುಶೇಖರಭಾರತೀಯವರ ಅಮೃತಹಸ್ತದಿಂದ ಆಶೀರ್ವಾದ ಪೂರ್ವಕವಾಗಿ ನಮ್ಮ ಸಂಗೀತ ಸೇವೆಯು ಮುಂದುವರೆಯಲಿ ಎಂದು ಆಶೀರ್ವದಿಸಿ ಅನುಗ್ರಹಿಸಿರುತ್ತಾರೆ. ಇಷ್ಟು ದಿನಗಳ ಒಂದು ಸೇವೆಗೆ ಜಗದ್ಗುರುಗಳ ಅಮೃತಹಸ್ತದಿಂದ ಇಂತಹ ಆಶೀರ್ವಾದ ದೊರೆತಿದ್ದು ಬಹುಶಃ ನಮ್ಮ ಸೇವೆ ಸರಿದಾರಿಯಲ್ಲಿ ನಡೆದಿದೆ ಎಂಬ ಭಾವನೆ ತರುತ್ತಿದೆ. ಅದರಂತೆ ಬಹಳ ಜಾಗರೂಕವಾಗಿ ಇದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಸಹ ಹೆಚ್ಚಿದೆ. ಇದೇ ಸಂದರ್ಭದಲ್ಲಿ ಇಷ್ಟು ವರ್ಷ ನಮ್ಮೊಂದಿಗೆ ಎಲ್ಲ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಅನಂತ ಕೃತಜ್ಞತೆಗಳನ್ನು ಹೇಳುತ್ತಾ ನಿಮ್ಮ ಸಹಕಾರ ಹೀಗೆ ಮುಂದುವರೆಯಲಿ ಎಂದು ಕೇಳಿಕೊಳ್ಳುತ್ತಿದ್ದೇವೆ 🙏🏻🙏🏻🙏🏻🙏🏻🙏🏻🙏🏻 Sri Sharada Shastreeya Sangeetha Sabha. Sringeri